ಬುಧವಾರ, ಜನವರಿ 27, 2010


ಆ ದಿನಗಳು
ಇಂದವನು ನನ್ನ ಸೌಂದರ್ಯಕ್ಕೆ ಕಾಂಪ್ಲಿಮೆಂಟ್ ನೀಡಿದ ಎಂದು ಗರ್ವದಿಂದ ಮಗಳು ಹೇಳಿದಾಗ, ಅಮ್ಮನಿಗೆ ಕಾಲೇಜಿನ ಅವಳಿ ಅಶೋಕಮರದ ಬಳಿ ತನಗಾಗಿ ದಿನವೂ ಪುಟ್ಟ ನಗುವೊಂದನ್ನು ಸನ್ಮಾನಿಸಲು ನಿಂತಿರುತ್ತಿದ್ದ ಕೋಲು ಮುಖದವನು ಸುಮ್ಮನೆ ನೆನಪಾದ.


ತೀರ್ಪು
ಅಪರಾಧಿಯಾಗಿದ್ದೂ ನಿರಪರಾಧಿಯೆಂದು ಕೋರ್ಟ್ ಘೋಷಿಸಿದ ನಂತರ ವಿಜಯೋತ್ಸವ ಆಚರಿಸಿ ಮನೆಗೆ ಮರಳುವ ವೇಳೆ ಅಪಘಾತದಲ್ಲಿ ಆತ ಸಾವನ್ನಪ್ಪಿದ. ಜನರು ಹೇಳಿದರು. ಇತ್ತೀಚೆಗೆ ದೇವರ ಕೋರ್ಟಿನಲ್ಲಿ ಕಂಪ್ಯೂಟರ್ ಬಂದಿದೆ ಅನ್ಸುತ್ತೆ. 

ಕೌತುಕ
ತನ್ನೊಂದಿಗೆ ಸ್ಕೂಟರಿನಲ್ಲಿ ಹೇಗೆ ಕುಳಿತುಕೊಳ್ಳಬೇಕೆಂದು ತಂದೆ ಮಗನಿಗೆ ಹೇಳಿಕೊಡುತ್ತಿದ್ದಾಗ ಆ ಪುಟ್ಟ ಕಣ್ಣುಗಳಲ್ಲಿ ಕೌತುಕ. ಕೆಲವು ವರ್ಷಗಳ ನಂತರ ಅಪ್ಪನಿಗೆ ವಿಮಾನದಲ್ಲಿ, ಸೀಟ್ ಬೆಲ್ಟ್ ಹಾಕುವುದು ಹೇಗೆಂದು ಮಗ ಹೇಳಿಕೊಡುವಾಗ ತಂದೆಯ ಕಣ್ಣುಗಳಲ್ಲೂ ಸಹ ಅದೇ ಕೌತುಕತೆ.

ಅರಿವು
ಯು.ಕೆ.ಜಿಯಲ್ಲಿ ಓದುವ ತನ್ನ ಮಗ ಕಂಪ್ಯೂಟರಿನಲ್ಲಿ ಚೆನ್ನಾಗಿ ಪೇಂಟಿಂಗ್ ಮಾಡುತ್ತಾನೆ ಎಂದು ಗರ್ವದಿಂದ ಹೇಳುತ್ತಿದ್ದವನು, ಒಮ್ಮೆ ಮಗನೊಂದಿಗೆ ಆರ್ಟ್ ಗ್ಯಾಲರಿಗೆ ಭೇಟಿ ನೀಡಿದ. ರವಿವರ್ಮನ ಅದ್ಭುತ ಕಲಾಕೃತಿಗಳನ್ನು ಕಂಡು ಮೂಕವಿಸ್ಮಿತನದ ಮಗ ಕೇಳಿದ " ಅಪ್ಪಾ ಈ ಪೇಂಟಿಂಗ್ ಅನ್ನು ಫೋಟೊಶಾಪ್ ನಲ್ಲಿ ಮಾಡಿದ್ದಾ ಅಥವಾ ಕೋರಲ್ ಡ್ರಾನಲ್ಲಿ ಮಾಡಿದ್ದಾ?"
ಜಂಭದ ತಂದೆಯ ಬಳಿ ಆ ಪ್ರಶ್ನೆಗೆ ಉತ್ತರವಿರಲಿಲ್ಲ.


ಆಟೋಗ್ರಾಫ್
"ಪ್ರೀತಿಯೆಂಬುದು ಹೂವಿದ್ದಂತೆ. ಅದು ಸಹಜವಾಗಿ ಅರಳಿದಾಗ ಮಾತ್ರ ಸೌಂದರ್ಯ ಮತ್ತು ಸುಗಂಧ" ಅವನ ಪ್ರೀತಿಯ ಬೇಡಿಕೆಯನ್ನು ನಿರಾಕರಿಸುತ್ತಾ ಅವಳು ಹೀಗೆಆಟೋಗ್ರಾಫ್ ಬರೆದಳು.
"ಒಬ್ಬ ಸೂರ್ಯ ಮುಳುಗಿದಾಗ, ಕಣ್ಮುಂದೆ ಹೊಳೆಯುವುದು ಸಾವಿರಾರು ನಕ್ಷತ್ರಗಳು" ಎಂದು ಅವನು ಅವಳ ಆಟೋಗ್ರಾಫಿನಲ್ಲಿ ನಗುತ್ತ ಬರೆದ.


ಹೀಗೂ ಒಂದು ವಿದಾಯ
" ಈಗ ತಾನೇ ಒಂದು ಬಸ್ಸು ಹೊರಟು ಹೋಯ್ತು. ನೆನು ಈ ನಿಮಿಷದಲ್ಲೇ ನೀರು ತರಲು ಹೋಗಬೇಕಿತ್ತೇ? ಪಾಪ ಅವನು ತುಂಬಾ ಬೇಜಾರು ಮಾಡಿಕೊಂಡ"
"ನನಗ್ಗೊತ್ತು, ಆದರೆ ಅವನು ನನ್ನನ್ನು ನೋಡಿ ಹೋಗಿಬರ್ತೀನಿ ಅನ್ನೋದನ್ನ ಕೇಳೋದಕ್ಕೆ ನನ್ನಿಂದಾಗೋಲ್ಲ ಕಣೋ, ಅದಕ್ಕೆ ಬೇಕಂತಲೇ ಕಾರಣ ಹೇಳಿ ಅವನ ಕಣ್ಣ ಮುಂದಿನಿಂದ ಮರೆಯಾಗಿ ನಿಂತಿದ್ದೆ"
ಮರೆಯಾಗಿ ನಿಂತು ಅವನು ಮತ್ತು ಬಸ್ಸು ಹೊರಟ ನಂತರ ಆತನ ಸ್ನೇಹಿತನು ಮಾಡಿದ್ದು ಒಂದೇ ಕೆಲಸ, ನಿಲ್ಲಿಸದೆ ಅತ್ತಿದ್ದು.


ತಂತ್ರಜ್ಞಾನ
"ನಿಮ್ಮ ಕಾಲದಲ್ಲಿ ಈ ರೀತಿ ಸೌಲಭ್ಯ ಇತ್ತೇ ತಾತ? ಬ್ಯಾಂಕು ತೆರೆಯಲು ಕಾಯಬೇಕಾಗಿಲ್ಲ. ಯಾವಾಗ ಬೇಕಾದರೂ ಅಕೌಂಟಿನಿಂದ ದುಡ್ಡು ತೆಗೆದುಕೊಳ್ಳಬಹುದು ATMನಲ್ಲಿ" ಗರ್ವದಿಂದ ಹೇಳಿದ ಮೊಮ್ಮಗ.
"ಹೌದು ಮಗು , ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ದುಡ್ಡಿನ ತುರ್ತು ಅವಶ್ಯಕತೆ ಬಂದಾಗ ನೆರೆಹೊರೆಯವರು ಸದ ಸಹಾಯಕ್ಕೆ ನಿಲ್ಲುತ್ತಿದ್ದರು. ಆದರೆ ಈಗ ಪಕ್ಕದ ಮನೆಯವರೊಂದಿಗೆ ಒಂದು ಸಣ್ಣ ಸಮಸ್ಯೆ ಇದ್ದರೂ ಸಹ ದೂರದಲ್ಲಿರೋ ಎಫ್ .ಎಂ ರೇಡಿಯೋ ಫೋನ್ ಮಾಡಿ ಅದನ್ನು ಬಗೆಹರಿಸಿಕೊಡಿ ಅಂತ ಅಳ್ತಾರೆ" ನಿರ್ಲಿಪ್ತರಾಗಿ ಹೇಳಿದರು ತಾತ.


 ಮೂಕಹಕ್ಕಿ
"ಈ ಕಣ್ಣು ಕಾಣದ ಮಕ್ಕಳಿಗೆ ಪುಕ್ಕಟೆ ಪಾಠ ಹೇಳಿಕೊಟ್ಟು, ನಿನಗೆ ಮನೆ ಕಡೆ ಗಮನ ಕೊಡಲಿಕ್ಕೇ ಸಮಯ ಇಲ್ಲ. ನನಗೆ ಮುಂದಿನ ತಿಂಗಳು ಹೈದರಾಬಾದಿಗೆ ಟ್ರಾನ್ಸ್ ಫರ್ ಸಿಗುತ್ತೆ. ಸುಮ್ಮನೆ ಹಠ ಮಾಡದೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಾ"
ಹೇಳಲು ಎಷ್ಟು ಸುಲಭ?
ಶಾಲೆಯ ಹೊರಗಡೆ ಹುಚ್ಚು ಹಿಡಿದಂತೆ ಗಾಳಿ ಬೀಸುತ್ತಿದೆ.
"ಅಕ್ಕಾ, ಹೊರಗೆ ಮಳೆ ಬೀಳ್ತಾ ಇದೆಯಾ?", ಕಿಟಕಿ ಬಳಿ ನಿಂತು ಪುಟ್ಟಿ ಕೇಳಿದಳು.
ಮನಸ್ಸಿನ ನೋವು ಮಡುಗಟ್ಟಿದಾಗ ಪದಗಳಿಗಾಗಿ ವ್ಯರ್ಥ ಹುಡುಕಾಟ.
"ಮಳೆ ಹೊರಗಿಲ್ಲ" ಎಂದಷ್ಟೇ ಹೇಳಿದಳು.


ಪರದೆಯ ಹಿಂದೆ
"ಟೈಟಲ್ ಕಾರ್ಡ್ ಪೂರ್ತಿ ತೋರಿಸ್ರೀ" ಕೂಗಿ ಹೇಳಿದ.ಆದರೆ ಬೆಳ್ಳಿಪರದೆ ಬರಿದಾಯಿತು. ಸಿನಿಮಾ ನೋಡಿ ಹೋಗುತ್ತಿದ್ದ ಜನರೆಲ್ಲರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.
"ನಾನು ಸ್ವತಂತ್ರನಾಗಿ ಸಂಕಲನ ಮಾಡಿದ ಮೊದಲ ಚಿತ್ರ, ಆದರೆ ಈ ಚಿತ್ರದಲ್ಲಿ ಟೈಟಲ್ ಕಾರ್ಡ್ ತೋರಿಸುತ್ತಿರುವುದು ಕೊನೆಯಲ್ಲಿ, ಏನು ಮಾಡುವುದು? ನನ್ನ ಹೆಸರನ್ನು ಥಿಯೇಟರಿನಲ್ಲಿ ನೋಡೋ ಭಾಗ್ಯ ನನಗಿಲ್ಲ" ಆತನ ಮನಸ್ಸಿನ ವೇದನೆ ಬೇರೆಯವರಿಗೆ ಕೀಟಲೆ ನಗುವಿಗೆ ಕಾರಣವಾಯ್ತು


ನಮ್ಮೂರ ಮಳೆ

ಊರೀಗ ತುಂಬಾ ಬದಲಾಗಿದೆ. ಊರಿಗೆ ಬಸ್ಸು ಬರದಿದ್ದ ಕಾಲದಲ್ಲಿ ಗದ್ದೆ, ತೋಟ, ಗುಡ್ಡಗಳನ್ನು ನೋಡಿಕೊಂಡು ನಡೆದು ಮನೆ ತಲುಪುತ್ತಿದ್ದೆ. ಆದರೆ ಈಗ ಹತ್ತು ನಿಮಿಷಕ್ಕೊಮ್ಮೆ ಊರಿಗೆ ಬಸ್ಸುಗಳಿವೆ. ಮಳೆ ಬಂದಾಗ ಕಾಲುದಾರಿಯಲ್ಲಿ ಹರಿದು ಬರುವ ನೀರಿನಲ್ಲಿ ಕಾಲು ನೆನೆಸಿಕೊಂಡು ನಡೆದಾಡುವ ಸುಖ ಈಗಿಲ್ಲ. ಕಾಲುದಾರಿ ಈಗ ಟಾರ್ ರಸ್ತೆಯಾಗಿದೆ. ಸಂತೋಷದ ವಿಷಯವೆಂದರೆ, ಮಳೆ ಬರುವಾಗ ಅಟ್ಟದ ಮನೆಯ ಚಿಕ್ಕ ಕೋಣೆಯ ಪುಟ್ಟ ಕಿಟಕಿಯ ಹತ್ತಿರ ಕುಳಿತುಕೊಳ್ಳಲು ಇಂದಿಗೂ ನಾವು ಪುಟ್ಟ ಮಕ್ಕಳಂತೆ ಜಗಳವಾಡುತ್ತೇವೆ. ನಮ್ಮೂರ ಮಳೆ ಮಾತ್ರ ಇಂದಿಗೂ ಬದಲಾಗಿಲ್ಲ

ನವರತ್ನ
"ಪರ್ವಾಗಿಲ್ಲ ಪೊಲೀಸ್ ಸಾರ್, ತಗೊಳ್ಳಿ. ನನಗೊತ್ತಿದೆ ನಿಮಗೆ ಹಣದ ಅವಶ್ಯಕತೆ ಇದೆ. ನಿಮ್ಮ ಹೆಂಡತಿಗೆ ಅರ್ಜೆಂಟಾಗಿ ಆಪರೇಷನ್ ಮಾಡಬೇಕು. ಅದಕ್ಕಾಗಿ ನಿಮಗೆ ಮೂರು ಸಾವಿರದ ಕೊರತೆ ಇದೆ. ನನಗೆ ಟೀ ಶಾಪ್ ಮಣಿ ಎಲ್ಲಾ ಹೇಳಿದ. ನೀವು ಒಳ್ಳೆಯವರು ಸಾರ್, ಒಂದು ದಿನವೂ ನನ್ನನ್ನ ನೀವು ವೇಶ್ಯೆಯಂತೆ ಕರೆದದ್ದಿಲ್ಲ. ಎಲ್ಲರೂ ನೋಡೊ ಕೆಟ್ಟ ದೃಷ್ಟಿಯಿಂದ ನೋಡಿದ್ದಿಲ್ಲ. ಈ ದುಡ್ಡು ನಾನು ಬೆವರು ಸುರಿಸಿ ದುಡಿದದ್ದು, ತಗೊಳ್ಳಿ ಸಾರ್"
"ತುಂಬಾ ಉಪಕಾರವಾಯಿತು ರತ್ನ, ನೀನು ಹೆಸರಿಗೆ ತಕ್ಕ ಹಾಗೆ ರತ್ನನೇ" ಅವನಿಂದ ಹೆಚ್ಚು ಮಾತನಾಡಲಾಗಲಿಲ್ಲ.
"ಒಂದು ಮಾತು ಹೇಳಲಾ ಸಾರ್?"
"ಹೇಳು ರತ್ನ"
"ನನ್ನ ಅಪ್ಪನೂ ನನ್ನನ್ನ ರತ್ನ ಅಂತಾನೇ ಕರೀತಿದ್ರು"



ಕಳೆದುಹೋದ ನಕ್ಷತ್ರ

"ಜೈಲರ್ ಹೇಳಿದ್ರು, ಸರ್ಕಾರದಿಂದ ಹಣ ಬಿಡುಗಡೆಯಾಗಿದೆಯಂತೆ, ಒಂದು ವಾರದಲ್ಲಿ ಜೈಲಿನ ರಿಪೇರಿ ಕೆಲಸ ಶುರುವಾಗುತ್ತದಂತೆ. ಸದ್ಯ ಆಮೇಲಾದರೂ ಮಳೆ ಬಂದಾಗ ನೆಮ್ಮದಿಯಿಂದ ನಿದ್ದೆ ಮಾಡಬಹುದು. ಈಗ ನೋಡು ಸೂರಿನಿಂದ ನೀರು ಸೋರಿ ಕೊಳದಂತಾಗಿದೆ ನಮ್ಮ ರೂಮು"
"ಹೌದು" ಸುಮ್ಮನೆ ತಲೆಯಾಡಿಸಿದ.
"ಆದರೆ ರಾತ್ರಿ ಚಂದ್ರನನ್ನು , ನಕ್ಷತ್ರಗಳನ್ನು ನೋಡುತ್ತಾ ಮಲಗುವ ಪುಣ್ಯ ಮುಂದೆ ಸಿಗುವುದಿಲ್ಲ"
ಹೌದೆನ್ನುವ ಸರದಿ ಅವನದಾಗಿತ್ತು.

ನಾಗರೀಕತೆ

"ಅಪಕಲಿಪ್ತೊ" ವಾಹ್ ಎಂತಹ ಚಿತ್ರ.ನೋಡಿದರೆ ಇಂತಹ ಮೂವಿ ನೋಡಬೇಕು. ನಾಗರೀಕತೆಗೆ ಮುಂಚೆ ಜನ ಹೇಗೆ ಜೀವಿಸುತ್ತಿದ್ದರು ಅಂತ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ನನಗೆ ಅದರ ಲೊಕೇಶನ್, ಚಿತ್ರಕಥೆ, ಫೋಟೋಗ್ರಾಫ್ ಎಲ್ಲ ಇಷ್ಟವಾಯ್ತು"
"ಅಯ್ಯೋ, ಮುಂದೆ ನೋಡಿ" ಹೇಳಿ ಮುಗಿಸುವಷ್ಟರಲ್ಲಿ ಕಾರು ಒಬ್ಬ ಭಿಕ್ಷುಕನಿಗೆ ಹೊಡೆದಾಗಿತ್ತು.
"ಈಗೇನು ಮಾಡುವುದು?" ನಡುಗಿದ ಸ್ವರ.
"ಪುಣ್ಯಕ್ಕೆ ರಸ್ತೆಯಲ್ಲಿ ಯಾರೂ ಇಲ್ಲ. ಬೇಗ ರಿವರ್ಸ್ ತೆಗೆದುಕೊಂಡು ಹೊರಡೋಣ".

ಶುಕ್ರವಾರ, ಜನವರಿ 15, 2010


ಒಳ್ಳೆಯ ಕಾಲ
"ನಮಗೂ ಒಳ್ಳೆಯ ಕಾಲ ಬಂದೇ ಬರುತ್ತೆ" ಎಂದು ಹೇಳುತ್ತಿದ್ದರು ದಂಪತಿಗಳು. ಬಾಗಿಲು ಬಡಿದ ಶಬ್ದವಾಯಿತು. ಯಾರು ಬಾಗಿಲು ತೆರೆಯಬೇಕು? ಇಬ್ಬರಲ್ಲೂ ಜಗಳ ಪ್ರಾರಂಭವಾಯಿತು. ಜಗಳ ಮುಗಿಯುವಷ್ಟರಲ್ಲಿ ಬಾಗಿಲು ಬಡಿಯುವ ಶಬ್ದ  ನಿಶ್ಚಲವಾಯಿತು.  

ನೆನಪು 
ಅಮ್ಮನ ನೆನಪಾದಾಗ ಚಂದ್ರನನ್ನು, ಅಪ್ಪನ ನೆನಪಾದಾಗ ಸೂರ್ಯನನ್ನು ನೋಡು, ದು:ಖ ಮಾಯವಾಗುತ್ತದೆ ಎಂದಿದ್ದರು ಗುರುಗಳು. ಆದರೆ ಅವನಿಗೆ ರಾತ್ರಿಯಲ್ಲಿ ಅಪ್ಪನ ನೆನಪೇ ಆಗುತ್ತಿತ್ತು. 

ಹುಡುಕಾಟ 
ತುಂಬ ದಿನಗಳ ಹುಡುಕಾಟದ ನಂತರ ಅವನಿಗದು ದೊರಕಿತು. ಹುಡುಕಾಟದ ರುಚಿ ಹತ್ತಿದ್ದ ಆತನಿಗೆ ಮರುಕ್ಷಣದಲ್ಲೇ ಮತ್ತೊಂದು ಯೋಚನೆ ಹೊಳೆಯಿತು. "ಇನ್ನು ಹುಡುಕಿದರೆ ಇದಕ್ಕಿಂತ ಒಳ್ಳೆಯದು ದೊರೆಯಬಹುದೇನೋ?" 

ಮರೆವು 
ಮೊಬೈಲ್ ಫೋನ್ ಒಂದು ಪುಟ್ಟ ಪ್ರಪಂಚ. ಇದರಿಂದ ವಿಶ್ವದ ಯಾವ ಮೂಲೆಗಾದರೂ ಸಂದೇಶ ಕಳುಹಿಸಬಹುದು, ಯಾರೊಂದಿಗೆ ಬೇಕಾದರೂ ಮಾತನಾಡಬಹುದು ಎಂದಿದ್ದ ಅವನು ಅದೇ ಫೋನಿನಿಂದ ತನ್ನ ವೃದ್ಧ ತಂದೆ ತಾಯಿಯರೊಂದಿಗೆ ಮಾತನಾಡಬಹುದೆ0ಬುದನ್ನು ಯಾಕೋ ಮರೆತಿದ್ದ.  

ಉಡುಗೊರೆ 
ಬೋರ್ಡಿಂಗ್ ಸ್ಕೂಲಿನಲ್ಲಿ ಓದುತ್ತಿರುವ ಮಗನ ಹುಟ್ಟುಹಬ್ಬದಂದು, ಅವನಿಗಾಗಿ ವಿಶೇಷವಾಗಿ ತಯಾರಿಸಿದ ಕೇಕನ್ನು ಡ್ರೈವರ್ ಬಳಿ ಕೊಟ್ಟು ಕಳುಹಿಸಿದ ತಂದೆ. ಒಂದು ತುಂಡನ್ನು ರುಚಿಸಿ  ನೋಡದೆ ಸಕ್ಕರೆ ಕಡಿಮೆಯಿದೆಯೆಂದು ವಾಪಸ್ ಕಳುಹಿಸಿದ ಮಗ. 
ತಕ್ಷಣ ಆತನ ತಂದೆ ಬೇಕರಿಯವನ ಪೋನ್ ನಂಬರಿಗಾಗಿ ಹುಡುಕಾಡಿದ.    

ಉಪದೇಶ 
"ವ್ಯಾಪಾರ ಮಾಡಬೇಕೆಂದಿದ್ದೇನೆ, ಉಪದೇಶ ನೀಡಿ ಸ್ವಾಮಿಜಿ" 
"ನಿನ್ನ ಕೈನಲ್ಲಿರುವ ಮೊಬೈಲನ್ನು ಅ ಗೋಡೆಗೆ ರಭಸವಾಗಿ ಎಸೆ"
ಮೊಬೈಲ್ ನೂರು ಚೂರಾಗಿ ಕೆಳಗೆ ಬಿಟ್ಟು. ಆತನ ಕಣ್ಣಲ್ಲಿ ಆಶ್ಚರ್ಯ ಮತ್ತು ದು:ಖ.
ಸ್ವಾಮೀಜಿ ಹೇಳಿದರು " ಇದೇ ವ್ಯಾಪಾರದ ಮೊದಲ ಮಂತ್ರ, ಕಣ್ಣು ಮುಚ್ಚಿಕೊಂಡು ಯಾರನ್ನು ನಂಬಬೇಡ" 

ಗುರುವಾರ, ಜನವರಿ 14, 2010


ನಿಗೂಢ 
ತಿಂಗಳಿಗೆ ಲಕ್ಷ ದುಡಿಯುವ ಅಪ್ಪ, ತಾತನ ಮನೆಗೆ ಹೋಗುವಾಗ ಮಾತ್ರ ದುಬಾರಿ ಕಾರನ್ನು ಬಿಟ್ಟು ರೈಲಿನಲ್ಲಿ ಹೋಗುವುದು ಎಂದೂ ನಿಗೂಡವಾಗಿ ಉಳಿದಿತ್ತು ಮಗನಿಗೆ.
ತಾತನ ಮನೆಯಿಂದ ಮರಳಿ ಬರುವಾಗ ರೈಲು ಯಾತ್ರೆಯ ಖರ್ಚಿಗೆಂದು ಪ್ರೀತಿಯಿಂದ ಕೊಡುತ್ತಿದ್ದ ನೂರು ರೂಪಾಯಿಗೆಂದು ಅಪ್ಪ ಹೇಳಿದಾಗ ಮಗನಿಗೆ ನಂಬಲಾಗಲಿಲ್ಲ.   

ವಿದಾಯ
ವಿದಾಯ ಹೇಳುವ ದಿನ ಅವನ ಆಟೋಗ್ರಾಪ್ಹ್ ಪಡೆಯಲು ಹೋದಾಗ ಆತ ಎಂದಿನ ನಗುಮುಖದಿಂದ ನೀಡಿದ್ದ. ಆಕೆ ತನ್ನ ಆಟೋಗ್ರಾಪ್ಹ್ ಅವನ ಬಳಿಗೆ ಚಾಚಿದಾಗ 
"ಒಮ್ಮೆ ಮನತುಂಬಿ ನಕ್ಕುಬಿಡು, ಕಣ್ಣು ತುಂಬಿಸಿಕೊಂಡು ಬಿಡುತ್ತೇನೆ. ಅದಕ್ಕಿಂತ ದೊಡ್ಡ ಆಟೋಗ್ರಾಪ್ಹ್ ಬೇರೊಂದಿಲ್ಲ" ಅಂದಿದ್ದ. 
ಇಬ್ಬರು ನಕ್ಕಿದ್ದರು. ನಗುವಿನ ಕೊನೆಯಲ್ಲಿ ಇಬ್ಬರ ಕಣ್ಣುಗಳು ನೆನೆದದ್ದು ಒಬ್ಬರಿಗೊಬ್ಬರು ತೋರ್ಪದಿಸಲಿಲ್ಲ .
ಅವಳ ಮದುವೆಯ ದಿನದಂದು ಒಮ್ಮೆಲೇ ಆತ ಪ್ರತ್ಯಕ್ಷನಾದ. ಅವಳ ಕಣ್ಣಲ್ಲಿ ಮಿಂಚು ಮತ್ತು ಮಳೆ. "ಎಲ್ಲಿದ್ದೆ ಇಲ್ಲೀ ತನಕ" ಮನಸ್ಸು ಕೇಳಬೇಕೆನಿಸಿತು. "ಬನ್ನಿ ಯಾವಾಗ ಬಂದಿರಿ? ಊಟ ಮಾಡಿಕೊಂಡೆ ಹೋಗಬೇಕು" ಅಂದು ಸಹ ಮನಸ್ಸಿನಲ್ಲಿದ್ದುದು ಬಾಯಿಗೆ ಬರಲಿಲ್ಲ.

ಮನಸ್ಸು 
ಕಣ್ಣು ಕಾಣದ ಮುದುಕಿಯನ್ನು ರಸ್ತೆ ದಾಟಿಸಿ, ಬಸ್ ಹತ್ತಿಸಿ ಕಳುಹಿಸಿದಕ್ಕೆ ಹದಿನೈದು ನಿಮಿಷ ಕೆಲಸಕ್ಕೆ ತಡ.
ಬಾಸ್ ನ  ಕೋಣೆಯಿಂದ ಹೊರಬರುವಾಗ ಅವರಾಡಿದ ಮಾತು ಮನಸ್ಸಿನಲ್ಲೇ ಮರುಧ್ವನಿಸಿತು.
"ಯಾರ ಜೊತೆ ಸುತ್ತುತ್ತಿದ್ದಿರಿ  ಇಷ್ಟೊತ್ತು?"
"ಪಾಪ ಕಣ್ಣು ಕಾಣದವರು" ಮನಸ್ಸು ಉತ್ತರಿಸಿತು. 
ರುಚಿ
ಒಲವಿನ ವಸಂತ ಕಾಲದಲ್ಲಿ ಅವಳೊಂದಿಗೆ ಪಾರ್ಕಿನಲ್ಲಿ ಕುಳಿತು ಮಾತನಾಡುವಾಗ, ಸುಮ್ಮನೆ ಬಾಯಿಗಿಡುತ್ತಿದ್ದ ಹುಲ್ಲಿನ ರುಚಿಯೇ ರುಚಿ! 
ಮದುವೆಯ ನಂತರ ಅವಳ ಅಡಿಗೆಯ ರುಚಿ ನೋಡಿದವನೇ ಹೇಳಿದ 
"ಇದಕ್ಕಿಂತ ಪಾರ್ಕಿನ ಹುಲ್ಲೆ ಎಷ್ಟೋ ವಾಸಿ" 

ಬೆಳದಿಂಗಳು ಮತ್ತು ಮಳೆ


ಬಡತನದ ದಿನಗಳಲ್ಲಿ ಒಂಟಿ ಕೋಣೆ ಮನೆಯ ಮುಂದೆ ಕುಳಿತು, ಬೆಳದಿಂಗಳಲ್ಲಿ ಊಟ ಮಾಡುತ್ತಿದ್ದಾಗ, ಹೂವಿನಂತಹ ಮಳೆ ಬಂದು ಊಟ ಮಳೆಯಲ್ಲಿ ಮಿಂದದ್ದು, ಜೊತೆಯಾಗಿ ಕುಳಿತು ಅದೇ ಊಟವನ್ನು ಸವಿದದ್ದು! ಎಂತಹ ದಿನಗಳವು! 
ಇಂದು ಪರಿಸ್ಥಿತಿ ಬದಲಾಗಿದೆ. ಶ್ರೀಮಂತಿಕೆ ನೆರಳಿನಂತೆ ಜೊತೆಯಲ್ಲಿದೆ. ಸಮಯದ ವಿಷಯದಲ್ಲಿ ಆತನೀಗ ಬಲು ಜಿಪುಣ. 
ಒಮ್ಮೆ ಆತ ಕೇಳಿದ "ಈ ಮನೆಯಲ್ಲಿ ನಿನಗೇನಿದೆ ಕೊರತೆ?"
ಮೌನಿಯಾಗಿದ್ದ ಅವಳಂದು ಉತ್ತರಿಸಿದಳು. "ಬೆಳದಿಂಗಳು ಮತ್ತು ಮಳೆ"     

ನಿರೀಕ್ಷೆ 
ಭತ್ತ, ರಾಗಿ ಮತ್ತು ತರಕಾರಿಯನ್ನು ಬೆಳೆದು ಕೈ ಸುಟ್ಟು ಕೊಂಡಾಗ, ಕಬ್ಬು ಸಿಹಿಯ ಜೊತೆ ಸಿರಿಯನ್ನು ತರುತ್ತದೆಂದು ಅದನ್ನು ಬೆಳೆದ. ಕಬ್ಬೂ ಸಹ ಕೈ ಸುಟ್ಟಾಗ ಆತ ಕಬ್ಬಿನ ಬೆಳೆಯನ್ನೇ ಸುಟ್ಟ.   

ಸಾವು 
ನನ್ನ ಪ್ರೀತಿಗೆ ಸಾವೇ ಇಲ್ಲವೆಂದು ಹೇಳುತ್ತಿದ್ದವನು 
ಅ ಪ್ರೀತಿ ನಷ್ಟವಾದಾಗ ಅದೇ ಸಾವಿಗೆ ಶರಣಾದ  

.


ನಾಳೆ 
ನಾಳೆಯೇ ಇಲ್ಲವೆಂದು ಬದುಕುತ್ತಿದ್ದವನು ಮತ್ತು ನಾಳೆಯ ಬಗ್ಗೆಯೇ ಯೋಚಿಸುತ್ತ ಬದುಕುತ್ತಿದ್ದವನು, ಇಬ್ಬರು ಸೇರಿ ಒಂದು ದಿನ ಪ್ರಯಾಣಕ್ಕೆ ಹೊರಟರು. ಪ್ರಯಾಣ ಅಂತ್ಯ ಗೊಂಡದ್ದು ಅಪಘಾತದಲ್ಲಿ. 
ಜನರು ಹೇಳಿದರು "ಅಯ್ಯೋ ಇವರು ಇಂದೇ ಪ್ರಯಾಣಕ್ಕೆ ಹೊರಡಬೇಕಿತ್ತೆ? ನಾಳೆ ಹೊರಟಿದ್ದರೆ ಈ ಗತಿ ಬರುತ್ತಿರಲಿಲ್ಲ"  

ಬುಧವಾರ, ಜನವರಿ 13, 2010


ಎಲ್ಲರಿಗೂ ನನ್ನ ನಮಸ್ಕಾರ 
ದಟ್ಸ್ ಕನ್ನಡ ಡಾಟ್ ಕಾಮ್ ನಲ್ಲಿ ಪ್ರಕಾಶಿತವಾದ ನನ್ನ ನ್ಯಾನೋ ಕತೆಗಳನ್ನು ಮೆಚ್ಚಿದ ಹಲವಾರು ಗೆಳೆಯರ ಒತ್ತಾಯದ ಮೇರೆಗೆ ನಾನು ನನ್ನ ಕತೆಗಳನ್ನು ಈ ಬ್ಲಾಗ್ ಮೂಲಕ ಲೋಕಾರ್ಪಣೆ ಮಾಡುತ್ತಿದ್ದೇನೆ.
ತಮಗೆಲ್ಲ ಇಷ್ಟವಾಗಬಹುದೆಂದು ನಿರೀಕ್ಷಿಸಿದ್ದೇನೆ.
ಸಹಕರಿಸಿ ಬೆಳೆಸಿ 
ತಮ್ಮ ನಲ್ಮೆಯ 
ಗೋಪಕುಮಾರ್